ಪುಷ್ಪದಂತ - 
ಈ ಹೆಸರಿನವರ ಇಬ್ಬರ ವಿಷಯ ಇಲ್ಲಿದೆ. ಇದರಲ್ಲಿ ಮೊದಲನೆಯವ ಕ್ರಿ. ಶ. 2ನೆಯ ಶತಮಾನದ ಒಬ್ಬ ಜೈನ ಆಚಾರ್ಯ. ಈತ ಧರಸೇನಾಚಾರ್ಯನ ಶಿಷ್ಯ, ಧರಸೇನ ಮಹಾನ್ ಶ್ರುತಜ್ಞಾನಿ; ತನ್ನ ಅನಂತರ ಶ್ರುತಜ್ಞಾನ ಲೋಪಗೊಳ್ಳುವ ಸಾಧ್ಯತೆಯಿದೆಯೆಂಬುದನ್ನು ಮನಗಂಡು ಪುಷ್ಪದಂತ, ಭೂತಬಲಿಗಳಿಬ್ಬರಿಗೆ ಶ್ರುತಜ್ಞಾನ ದಾನ ಮಾಡಿದ. ಗುರುವಿನ ನಿರೂಪ ಪಡೆದ ಪುಷ್ಟದಂತ ಬನವಾಸಿಗೆ ಬಂದು ಅಲ್ಲಿ ಬೇಸದಿ ಸೂತ್ರಗಳನ್ನು ರಚಿಸಿದ. ಅವನ್ನು ಜಿನಪಾಲಿತನೆಂಬ ಶಿಷ್ಯನೊಡನೆ ಭೂತಬಲಿಗೆ ಕಳುಹಿಸಿದ. ಅವರ ಅನಂತರದ ರಚನೆ ಭೂತ ಬಲಿಯದು. ಹೀಗೆ ಇಬ್ಬರೂ ಸೇರಿ ರಚಿಸಿದ ಗ್ರಂಥವೇ ಷಟ್‍ಖಂಡಾಗಮ ಎಂದು ಪ್ರಸಿದ್ಧವಾಗಿದೆ.

	ಇನ್ನೊಬ್ಬ ಪುಷ್ಪದಂತ ಪ್ರಕಾಂಡ ಪಂಡಿತ. ಅಪಭ್ರಂಶ ಭಾಷೆಯ ಮಹಾಕವಿ. ಭಾಷೆಯ ಮೇಲಿನ ಅವನ ಅಸಾಧಾರಣ ಪ್ರಭುತ್ವ, ಓಜಸ್ಸಿನ ಶೈಲಿ, ಜೈನ ದರ್ಶನ ಮತ್ತು ಪುರಾಣಗಳ ಆಳವಾದ ಜ್ಞಾನ. ಸಾಲಂಕಾರ ಕವಿತ್ವ, ಸುಂದರ ವರ್ಣನೆ, ಶಬ್ದ ಸಮೃದ್ಧಿ ಇವೆಲ್ಲ ಗುಣಗಳನ್ನು ಇವನ ಕೃತಿಗಳಲ್ಲಿ ಕಾಣಬಹುದು.

	ಜನ್ಮತಃ ಈತ ಕಾಶ್ಯಪ ಗೋತ್ರಜ ಋಗ್ವೇದಿಬ್ರಾಹ್ಮಣ. ಇವನ ಮನೆತನದ ಹೆಸರು ಖಂಡ, ತಂದೆ ಕೇಶವಭಟ್ಟ. ತಾಯಿ ಮುಗ್ಧಾದೇವಿ. ತಂದೆತಾಯಿಯರು ವಿದರ್ಭ ನಿವಾಸಿಗಳು. ಆರಂಭದಲ್ಲಿ ಶೈವರು; ಮುಂದೆ ದಿಗಂಬರ ಜೈನ ಗುರುವಿನ ಉಪದೇಶ ಪಡೆದು ಜೈನ ಧರ್ಮ ಸ್ವೀಕಾರ ಮಾಡಿದರು; ಕೊನೆಗೆ ಜಿನಸಂನ್ಯಾಸ ಸ್ವೀಕರಿಸಿ ದೇಹ ತ್ಯಾಗ ಮಾಡಿದರು. ಪುಷ್ಪದಂತ ಆರಂಭದಲ್ಲಿ ಶೈವ. ಮೊದಲು ಭೈರವನರೇಂದ್ರನೆಂಬ ರಾಜನಲ್ಲಿ ಆಶ್ರಯ ಪಡೆದಿದ್ದ. ಮುಂದೆ ಮಾನ್ಯಖೇಟ ನಗರದಲ್ಲಿ ಮಹಾ ಮಾತ್ಯ ಭರತನ ಆಶ್ರಯ ಪಡೆದು ಅವನ ಪ್ರೇರಣೆಯಿಂದ ಮಹಾಪುರಾಣ ರಚಿಸಿದ್ದಾನೆಂದು ತಿಳಿಯುತ್ತದೆ. ಇವನಿಗೆ ಅಭಿಮಾನಮೇರು, ಆಭಿಮಾನಚಿಹ್ನ, ಕಾವ್ಯರತ್ನಾಕರ, ಕವಿಕುಲತಿಲಕ, ಸರಸ್ವತೀನಿಲಯ, ಕೌವಪಿಸಲ್ಲ, (ಅಂದರೆ ಕಾವ್ಯಪಿಶಾಚ) ಬಿರುದುಗಳಿವೆ. 

	ಅತ್ಯಂತ ಸ್ವಾಭಿಮಾನಿಯಾಗಿದ್ದ ಪುಷ್ಪದಂತ ಭೈರವನೆಂಬ ರಾಜನ ಆಸ್ಥಾನದಲ್ಲಿ ರಾಜಕವಿಯಾಗಿದ್ದ ಸಂದರ್ಭದಲ್ಲಿ ಪ್ರಾಸಂಗಿಕವಾಗಿ ಆದ ಅವಮಾನದಿಂದ ಮನನೊಂದು ಆ ರಾಜಾಶ್ರಯವನ್ನು ಬಿಟ್ಟು ಮಾನ್ಯಖೇಟಕ್ಕೆ ಬಂದ. ಆಗ ಅಲ್ಲಿ ಆಳುತ್ತಿದ್ದ ಕೃಷ್ಣರಾಜನೆಂಬ ರಾಷ್ಟ್ರಕೂಟ ರಾಜನ ಮಹಾಮಾತ್ಯ ಭರತ ಈತನಿಗೆ ಆಶ್ರಯವಿತ್ತ. ಭರತನಿಗೆ ಜೈನಧರ್ಮದಲ್ಲಿ ಅಪಾರ ಭಕ್ತಿ. ಅವನ ಮಗ ನನ್ನ. ಹೀಗೆ ಭರತ ಮತ್ತು ನನ್ನರ ಬಹುಮುಖ ವ್ಯಕ್ತಿತ್ವಗಳು ಪುಷ್ಪದಂತನ ಕೃತಿಗಳಲ್ಲಿ ಕಂಡುಬರುತ್ತವೆ.

	ಪುಷ್ಪದಂತನ ಮುಖ್ಯ ಕೃತಿಗಳು ಮೂರು : ತಿಸಟ್ಠಿ ಮಹಾಪುಲಿಸಗುಣಾಲಂಕರಣ (ತ್ರಿಷಷ್ಟಿ ಮಹಾಪುರುಷ ಗುಣಾಲಂಕಾರ); ಜಸಹರ ಚರಿಉ ಮತ್ತು ಣಾಯ ಕುಮಾರ ಚರಿಉ.

	ತಿಸಟ್ಠಿ ಮಹಾಪುಲಿಸಗುಣಾಲಂಕರಣ ಮಹಾಪುರಾಣವೆಂಬ ಹೆಸರಿನಿಂದ ಪ್ರಸಿದ್ಧ. 102 ಸಂಧಿಗಳಿರುವ ಈ ಕೃತಿಯಲ್ಲಿ 63 ಶಲಾಕ ಪುರುಷರ ಚರಿತ್ರಗಳು ಸುಂದರ ಕಾವ್ಯ ರೀತಿಯಿಂದ ವರ್ಣಿತವಾಗಿವೆ. ಇದರಲ್ಲಿ ಆದಿಪುರಾಣ ಮತ್ತು ಉತ್ತರ ಪುರಾಣ ಎಂಬ 2 ಭಾಗಗಳಿವೆ. ಆದಿಪುರಾಣದಲ್ಲಿ ಪ್ರಥಮ ತೀರ್ಥಂಕರನಾದ ವೃಷಭದೇವನ ಚರಿತ್ರೆ ಇದೆ. ಉತ್ತರ ಪುರಾಣದಲ್ಲಿ ಉಳಿದ 23 ಮಂದಿ ತೀರ್ಥಂಕರರ ಹಾಗೂ ಸಮಕಾಲೀನ ಮಹಾಪುರುಷರ ಚರಿತ್ರೆಗಳಿವೆ. ಎರಡೂ ಖಂಡಗಳೂ ಸೇರಿಕೊಂಡಂತೆ ಈ ಕೃತಿಯಲ್ಲಿ ಸುಮಾರು 20,000 ಶ್ಲೋಕಗಳಿವೆ. ಈ ಗ್ರಂಥವನ್ನು ಪೂರ್ತಿಗೊಳಿಸಲು ಕವಿಗೆ 6 ವರ್ಷ ಬೇಕಾಯಿತು. ಇದರ ವಿಷಯ ವ್ಯಾಪ್ತಿ ಬಹಳ ವಿಸ್ತಾರ; ಕವಿ ಹೇಳುವಂತೆ ಇದೊಂದು ವಿಶ್ವಕೋಶ. ಇದರಲ್ಲಿಯ ರಾಮಾಯಣ ಮತ್ತು ಹರಿವಂಶ ಪೃಥಕ್ ರೂಪವಾಗಿ ದೊರೆಯುತ್ತವೆ. ಈ ಗ್ರಂಥದ ಹಲವು ಕೃತಿಗಳು ಮತ್ತು ಕೆಲವು ಟಿಪ್ಪಣಿಗಳು ಉಪಲಬ್ಧವಿವೆ. ಪರಶುರಾಮ್ ಲಕ್ಷ್ಮಣ್ ವೈದ್ಯರಿಂದ ಸಂಪಾದಿತವಾದ ಇದು 3 ಭಾಗಗಳಲ್ಲಿ ಮಾಣಿಕಚಂದ ದಿಗಂಬರ ಜೈನ ಗ್ರಂಥಮಾಲೆಯಲ್ಲಿ ಪ್ರಕಟವಾಗಿದೆ. 

	ಣಾಯ ಕುಮಾರ ಚರಿಉ (ನಾಗಕುಮಾರ ಚರಿತೆ) : ಖಂಡಕಾವ್ಯ. ಇದರಲ್ಲಿ 9 ಸಂಧಿಗಳಿವೆ; ಪಂಚಮೀ ಉಪವಾಸದ ಫಲವನ್ನು ಉದಾಹರಿಸುವ ನಾಗಕುಮಾರನ ಕಥೆಯನ್ನು ಇದರಲ್ಲಿ ಹೇಳಿದೆ. ಇದರ ಕೊನೆಯ ಸಂಧಿಯಲ್ಲಿ ಸಾಂಖ್ಯ, ಮೀಮಾಂಸಾ, ಕ್ಷಣಿಕವಾದ ಶೂನ್ಯವಾದ ಈ ದಾರ್ಶನಿಕ ಮತಪ್ರಣಾಳಿಗಳನ್ನು ಖಂಡಿಸಲಾಗಿದೆ. ನೀತಿ, ಅರ್ಥ, ಜೋತಿಷ್ಯ ಶಾಸ್ತ್ರಗಳಲ್ಲಿ ಪುಷ್ಪದಂತನ ಪ್ರಭುತ್ವವೆಷ್ಟು ಎನ್ನುವುದನ್ನು ಇಲ್ಲಿ ತಿಳಿಯಬಹುದು. 

	3 ಜಸಹರ ಚರಿಉ (ಯಶೋಧರ ಚರಿತ್ರೆ) : ಒಂದು ಸುಂದರ ಖಂಡಕಾವ್ಯ. ಇದರಲ್ಲಿ ಅತ್ಯಂತ ಪ್ರಿಯ ಪುರಾಣಪುರುಷನಾದ ಯಶೋಧರ ಚರಿತ್ರವನ್ನು ವರ್ಣಿಸಲಾಗಿದೆ. ಇದರಲ್ಲಿ 4 ಸಂಧಿಗಳಿವೆ. ಜೈನ ಸಾಹಿತ್ಯದಲ್ಲಿ ಸಂಸ್ಕøತ, ಪ್ರಾಕೃತ, ಕನ್ನಡ, ತಮಿಳು ಮೊದಲಾದ ಭಾಷೆಗಳಲ್ಲಿ ಯಶೋಧರನ ಕಥೆ ದೊರೆಯುತ್ತದೆ. ಪುಷ್ಪದಂತನ ಸಮಕಾಲೀನನಾದ ಸೋಮದೇವನ ಯಶಸ್ತಿಲಕ ಪುಷ್ಪದಂತನ ಈ ಕೃತಿಗಿಂತ ತುಸು ಹಿಂದಿನದು. ಪುಷ್ಪದಂತನ ಕೃತಿಗಳಲ್ಲಿ ಮಹಾಪುರಾಣ ಮೊದಲನೆಯದು ಮತ್ತು ಯಶೋಧರಚರಿತೆ ಕಡೆಯದು. ಯಶೋಧರಚರಿತ್ರೆ ಪುಷ್ಪದಂತನ ಭಾಷಾಪ್ರಭುತ್ವದ ಸರ್ವೋತ್ಕøಷ್ಟ ನಮೂನೆಯದ್ದಾಗಿದೆ. ಜೈನ ಸಂಪ್ರದಾಯ ಈ ಕೃತಿಯಲ್ಲಿ ಬಹು ಸುಂದರವಾಗಿ ಚಿತ್ರಿತವಾಗಿದೆ. ಸೋಮದೇವ ವಾದಿರಾಜ ಹರಿಭದ್ರ ಇನ್ನೂ ಅನೇಕ ಮಂದಿ ದಿಗಂಬರ ಶ್ವೇತಾಂಬರ ಲೇಖಕರು ಪುಷ್ಪದಂತನ ಕೃತಿಗಳನ್ನು ಸಂಸ್ಕøತ ಪ್ರಾಕೃತಗಳಲ್ಲಿ ತಂತಮ್ಮ ರೀತಿಗಳಿಂದ ಅನುವಾದಿಸಿದ್ದಾರೆ. 

	ನಾಥೂರಾಮ ಪ್ರೇಮಿಯವರ ಮಾತಿನಲ್ಲಿ ಹೇಳುವುದಾದರೆ ಪುಷ್ಪದಂತ ಅಪಭ್ರಂಶ ಭಾಷೆಯ ಮಹಾಕವಿ. ಅವನ ಕಾವ್ಯದಲ್ಲಿ ಓಜಸ್ಸು ಪ್ರವಾಹ ರಸ ಸೌಂದರ್ಯ ಈ ವಿಶೇಷಗಳಿವೆ. ಇವು ಅನ್ಯತ್ರ ದುರ್ಲಭ. ಭಾಷೆಯ ಮೇಲೆ ಕವಿಗೆ ಅಸಮಾನ್ಯ ಅಧಿಕಾರವಿದೆ. ಅವನ ಶಬ್ದ ಭಂಡಾರ ವಿಶಾಲವಾಗಿದೆ. ಶಬ್ದಲಂಕಾರ ಮತ್ತು ಅರ್ಥಾಲಂಕಾರ ಇವೆರಡೂ ಅವನ ಕಾವ್ಯಗಳನ್ನು ಸಮೃದ್ಧಗೊಳಿಸಿವೆ. 
(ಎಂ.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ